May 30, 2016

ಕುವೆಂಪು ಕಂಡ ಕನಸು ನನಸಾಗಿಸಿದ ಕನ್ನಡದ ಕಟ್ಟಾಳು: ನಾಡೋಜ ದೇ.ಜ.ಗೌ

 ದೇಜಗೌ ಎಂದೇ ಹೆಸರಾಗಿರುವ ದೇ.ಜವರೇಗೌಡ ಅವರು ಕನ್ನಡದ ಗದ್ಯ ಬರಹದ ಬ್ರಹ್ಮ ಹಾಗೂ ಕುವೆಂಪು ಕಂಡ ಕನಸು ನನಸಾಗಿಸಿದ ಕನ್ನಡದ ಕಟ್ಟಾಳಾಗಿದ್ದರು. ಶ್ರೀ ಯುತರು ಕನ್ನಡ ಸಾಹಿತ್ಯದಕ್ಕೆ ಮಾಡಿದ ಕೃಷಿ ಜೊತೆಗೆ ಸಮೃದ್ಧವಾಗಿ
 ಕೊಡುಗೆ ನೀಡಿದ್ದಾರೆ. ಇವರು ಕನ್ನಡ ಸಾಹಿತ್ಯದ ಗದ್ಯ ಪ್ರಕಾರದಲ್ಲಿ ಮಾಡಿದ ಕೆಲಸ ಇನ್ಯಾರು ಮಾಡಿಲ್ಲ ಎನ್ನಬಹುದಾಗಿದೆ. ರಾಷ್ಟ್ರಕವಿ ಕುವೆಂಪು ಮಾನಸ ಪುತ್ರ ಎಂದೇ ಹೆಸರಾಗಿದ್ದ ನಾಡೋಜ ದೇ.ಜಗೌ ರವರು ಹೆಳೇಗನ್ನಡ, ನಡುಗನ್ನಡ, ಹೊಸಗನ್ನಡ, ಸಂಪಾದನೆ, ವಿಮರ್ಶೆ ಅನುವಾದ ಜೊತೆಗೆ ಸೃಜನಶೀಲ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಕಾವ್ಯ ಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಮಾಡಿದ್ದಾರೆ. .


 'ದೇಜಗೌ' ಎಂಬ ಸಂಕ್ಷಿಪ್ತ ನಾಮದಿಂದಲೇ ಸಾಹಿತ್ಯವಲಯದಲ್ಲಿ ಪ್ರಖ್ಯಾತರಾದ ಇವರು ಕನ್ನಡಕ್ಕೆ ವಿಶ್ವಮಾನ್ಯತೆ ದೊರೆಯಬೇಕು ಎಂಬ ಹಂಬಲವನ್ನು ತುಂಬಿಕೊಂಡು ಅವಿರತವಾಗಿ ಶ್ರಮಿಸಿದ ಕೀರ್ತಿ ಇವರದು. ಇವರು ಸ್ಥಾಪಿಸಿರುವ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಇವರ ಕನಸಿನ ಕುಡಿಯಾಗಿದೆ. 1918 ಜುಲೈ 6ರಂದು ಚನ್ನಪಟ್ಟಣ ತಾಲ್ಲೂಕಿನ ಚಕ್ಕರೆಗ್ರಾಮದಲ್ಲಿ ಜನಿಸಿನ ಶ್ರೀಯುತರ ತಂದೆ ದೇವೇಗೌಡರು ಮತ್ತು ತಾಯಿ ಚೆನ್ನಮ್ಮ. ಇವರಿಗೆ ತಮ್ಮ ಬಾಲ್ಯದಲ್ಲಿ ತುಡಿಯುತ್ತಿದ್ದ ಓದಿನ ಆಸಕ್ತಿ ಅವರನ್ನು ಬೆಂಗಳೂರಿಗೆ ಕರೆ ತಂದಿತು. ಬೆಂಗಳೂರಿನಲ್ಲಿ ಇಂಟರ್ ಮೀಡಿಯೇಟ್ ಓದುತ್ತಿದ್ದಾಗಲೇ ನೂರಾರು ಕವನ ಸಂಕಲನಗಳನ್ನು ರಚಿಸಿದ್ದರು.
1941ರಲ್ಲಿ ಮಹಾರಜ ಕಾಲೇಜಿನಲ್ಲಿ ವಿ.ಎ ಆನರ್ಸ್ ವಿದ್ಯಾಭ್ಯಸವನ್ನು ಮುಗಿಸಿದರು. ಇದೇ ವೇಳೆ, ರಾಷ್ಟ್ರಕವಿ ಕುವೆಂಪು ಅವರ ವಿಚಾರಧಾರೆಗಳಿಂದ ಪ್ರಭಾವಿತರಾಗಿ 1943 ರಲ್ಲಿ ಮೈಸೂರು ವಿವಿಯಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದರು.
ಕನ್ನಡ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಕೆಲಸಗಳನ್ನು ಮಾಡಿರುವ ಇವರು ಕನ್ನಡದ ಆಧುನಿಕ ಸಂಸ್ಕೃತಿಕಯನ್ನು ಕಟ್ಟಿದವರಲ್ಲಿ ಒಬ್ಬರು. ಹೀಗೆ ಸದಾ ಕನ್ನಡ ಪರ ಕಳಜಿಯನ್ನು ತೋರುತ್ತಾ ಉತ್ಸಾಹ, ಕ್ರೀಯಾಶಿಲತೆ, ಕಲ್ಪನಾ ಶಕ್ತಿಗಳಿಂದ ಒಂದೊಂದೆ ಮೆಟ್ಟಿಲುಗಳನ್ನು ಏರಿ ಉನ್ನತ ಸ್ಥಾನವನ್ನು ಪಡೆದುಕೊಂಡವರು ಬಂದವರು ದೇಜಗೌ.
ಪದವಿ ಪಡೆದ ನಂತರ ಮೂರು ವರ್ಷ ಸೆಕ್ರೆಟರಿಯೆಟ್ನಲ್ಲಿ ಗುಮಾಸ್ತರಾಗಿ ಕಾರ್ಯನಿರ್ವಹಿಸಿ ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಉಪನ್ಯಾಸ ವೃತ್ತಿ ಮಾಡಿ,  1946ರಲ್ಲಿ ಮೈಸೂರು ವಿವಿಯಲ್ಲಿ ಕನ್ನಡ ಅಧ್ಯಾಪಕರಾದರು. 1954ರಲ್ಲಿ ವೈಸೂರು ವಿವಿ ಪ್ರಸಾರಂಗದ ಕಾರ್ಯದರ್ಶಿಯಾಗಿ 1957ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಪರೀಕ್ಷಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, 1960ರಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ಪ್ರಾಂಶುಪಾಲರಾಗಿ. 1962ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥರು,  ಪ್ರಾಧ್ಯಾಪಕರಾಗಿ. 1966ರಲ್ಲಿ ಕುವೆಂಪುರಂತಹ ಮಹಾನ್ ಚೇತನಗಳೊಂದಿಗೆ ಕನ್ನಡ ಅಧ್ಯಯನ ಸಂಸ್ಥೆಯ ಸ್ಥಾಪನೆಗೆ ಸಂಸ್ಥಾಪಕ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ನಂತರ 1969ರ ನವೆಂಬರ್ 1ರಂದು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಆಯ್ಕೆಯಾದ ಇವರು ವಿಶ್ವ ವಿದ್ಯಾನಿಲಯವನ್ನು ಜಾಗತಿಕವಾಗಿ ಹೆಸರಾಗುವಂತೆ ಮಾಡಿದರು. 1994ರಲ್ಲಿ ಕನ್ನಡ ಅಧ್ಯಯನ ಸಂಸ್ಥೆಗೆ ‘ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ’ ಎಂದು ಪುನರ್ ನಾಮಕರಣ ಮಾಡಿದರು.
ಕನ್ನಡ ವಿಶ್ವಕೋಶವನ್ನು ನೀಡಿದ್ದು ಇವರ ಬಲು ದೊಡ್ಡ ಕೊಡುಗೆಯಲ್ಲಿ ಒಂದಾಗಿದ್ದು ಹಾಗೂ  ‘ವಿಷಯ ವಿಶ್ವಕೋಶ-ಕರ್ನಾಟಕ’, ‘ಇಂಗ್ಲಿಷ್-ಕನ್ನಡ ನಿಘಂಟು’, ‘ಸಮಗ್ರ ಕನ್ನಡ ಸಾಹಿತ್ಯಚರಿತ್ರೆ ‘, ‘ಕನ್ನಡ ಛಂದಸ್ಸಿನ ಇತಿಹಾಸ’ ಮುಂತಾದ ಕೆಲವು ಯಶಸ್ವಿಯಾಗಿ ನಿರ್ವಹಿಸಿದ ಮುಖ್ಯವಾದ ಯೋಜನೆಗಳಾಗಿವೆ.  ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನಮಾನವನ್ನು ದೊರಕಿಸಿಕೊಡುವ ಪ್ರಯತ್ನದಲ್ಲಿ ಇವರ ಪಾತ್ರ ಹಿರಿದು.
 ನಯಸೇನನ ‘ಧರ್ಮಾಮೃತ ಸಂಗ್ರಹ’ (1957), ಲಕ್ಷ್ಮೀಶನ ‘ಜೈಮಿನೀ ಭಾರತ’ (1959),ಕನಕದಾಸರ ‘ನಳಚರಿತ್ರೆ’ (1965), ಆಂಡಯ್ಯನ ‘ಕಬ್ಬಿಗರ ಕಾವ’ (1964), ಚಿಕ್ಕುಪಾಧ್ಯಾಯನ ‘ರುಕ್ಮಾಂಗದ ಚರಿತ್ರೆ’ (1982), ರಾಮನಾಥ ಚರಿತೆ, ನೇಮಿಚಂದ್ರನ ‘ಲೀಲಾವತೀ ಪ್ರಬಂಧ’ (ಕೆ.ವೆಂಕಟರಾಮಪ್ಪನವರೊಂದಿಗೆ) ಹಳೆಗನ್ನಡದಲ್ಲಿ ಕಾವ್ಯ ಸಂಪಾದನೆಯನ್ನು ಮಾಡಿದ್ದಾರೆ. ಇನ್ನು ನಡುಗನ್ನಡಕ್ಕೆ ಬಂದರೆ ಬಸಣ್ಣವರ ವಚನಗಳು ಇವರ ಜೀವನದಲ್ಲಿ ಸಾಕಷ್ಟು ಪ್ರಭಾವ ಬೀರಿದೆ. ಆಧುನಿಕ ಸಾಹಿತ್ಯದಲ್ಲಿ ವಿಶೇಷವಾಗಿ ಇವರದೇ ಯಾದ ಭಾಷಾ ಶೈಲಿಯನ್ನು ಹೊಂದಿದ್ದ ಇವರು ಸುಮಾರು 135 ಕೃತಿಗಳನ್ನು ರಚಿಸಿದ್ದಾರೆ.
ಜನಪದ ಕ್ಷೇತ್ರದಲ್ಲಿ ಇವರು ರಚಿಸಿದ ಪ್ರಮುಖ ಕೃತಿಗಳು ಜಾನಪದ ಅಧ್ಯಯನ’ (1976), ‘ಜಾನಪದ ಸೌಂದರ್ಯ’ (1977), ‘ಜಾನಪದ ವಾಹಿನಿ’ (1983), ‘ಜನಪದ ಗೀತಾಂಜಲಿ’ (ಸಂಪಾದಿತ ಕೃತಿ) (1978) ಮತ್ತು ಹೋರಾಟದ ಬದುಕು (ಭಾಗ 1, 2) (ಆತ್ಮಕಥೆ), ಹಾಗೂ ನೆನಪಿನ ಬುತ್ತಿ ಎನ್ನುವ ಶ್ರೀಯುತರು ತಮ್ಮ ಆತ್ಮಕಥೆಯನ್ನು ಬರೆದಿದಾರೆ.
1967ರಲ್ಲಿ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿಗೆ ಆಯ್ಕೆಯಾದ ಇವರು 1969ರಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದರು. 1970ರಲ್ಲಿ ಅಖಿಲ ಭಾರತ 47ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅಲಂಕಾರಿಸಿದರು. ನಂತರ 1975ರಲ್ಲಿ ಕನ್ನಡ ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. 1976ರಲ್ಲಿ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಅಧ್ಯಕ್ಷತೆ, 1974ರಲ್ಲಿ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತಿ ಕುರುಕ್ಷೇತ್ರದಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯವಿದ್ಯಾಲಯ ಸಮ್ಮೇಳನದಲ್ಲಿ ಅಧ್ಯಕ್ಷತೆ 1979ರಲ್ಲಿ ತಿರುವಾಂಕೂರಿನ ದ್ರಾವಿಡ ಭಾಷಾ ವಿಜ್ಷಾನ ಸಂಸ್ಥೆಯ ಸೀನಿಯರ್ ಫೆಲೋ ಗೌರವನ್ನು ಹೊಂದಿದರು.
ಕನ್ನಡ ಭಾಷೆ ನೆಲ, ಜಲದ ವಿಷಯ ವಿಷಯ ಬಂದಾಗ ತಮ್ಮ ಖಚಿತ ನಿಲುವು ವ್ಯಕ್ತಪಡಿಸುವ ಮೂಲಕ ಜನರಿಗಷ್ಟೇ ಅಲ್ಲದೆ ಆಡಳಿತ ನಡೆಸುವವರಿಗೂ ಸಹ ಮಾರ್ಗದರ್ಶನ ತೋರುತ್ತ ತಮ್ಮ ತಾವು ಹೆಚ್ಚು ಹೋರಾಟಗಾರನಾಗಿ ಗುರುತಿಸಿಕೊಂಡರು. ಕನ್ನಡಕ್ಕೆ ದಕ್ಕೆ ಬಂದಿದೆ ಎನ್ನುವ ಸಂದರ್ಭದಲ್ಲಿ ತಮ್ಮ ಇಳಿ ವಯಸ್ಸಿನಲ್ಲಿ ಸಹ ಪ್ರತಿಭಟನೆ ಮಾಡೋಣ ಎಂದು ಹೇಳುತ್ತಿದ್ದರು.
ಹೀಗೆ ತಮ್ಮ ಇಡೀ ಜೀವನವನ್ನು ಕನ್ನಡ ನಾಡು, ನುಡಿಗೆ ತಮ್ಮ ಜೀವನವನ್ನೆ ಮುಡುಪಾಗಿಟ್ಟ ಕುವೆಂಪು ಕನಸು ನನಸಾಗಿಸಿದ ಕನ್ನಡದ ಕಟ್ಟಾಳು ಶ್ರೀಯುತರು 2016 ವೇ 30ರಂದು  ಉಸಿರಾಟದಲ್ಲಿ ತೀವ್ರ ಏರು ಪೇರು ಕಂಡು ಬಂದ ಹಿನ್ನೆಲೆಯಲ್ಲಿ ಮೈಸೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಂಜೆ 6.30ರ ಸುಮಾರಿಗೆ ಇಹಲೋಕ ತ್ಯಜಿಸಿದರು.

ಪ್ರಶಸ್ತಿ/ಪುರಸ್ಕಾರಗಳು

  1. ದೇ. ಜ. ಗೌ. ಅವರು ಸರ್ಕಾರ ಮತ್ತು ಸಾರ್ವಜನಿಕರಿಂದ ಅನೇಕ ಪ್ರಶಸ್ತಿಗಳನ್ನೂ ಸನ್ಮಾನಗಳನ್ನೂ ಪಡೆದಿದ್ದಾರೆ.
  2. ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್,
  3. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ,
  4. ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ,
  5. ತಿರುವನಂತಪುರದ ‘ದ್ರವಿಡಿಯನ್ ಲಿಂಗ್ವಿಸ್ಟಿಕ್ಸ್ ಅಸೋಷಿಯೇಶನ್’ನ ಸೀನಿಯರ್ ಫೆಲೋ ಪ್ರಶಸ್ತಿ,
  6. ಕರ್ನಾಟಕ ಸರ್ಕಾರದ ಪಂಪ ಪ್ರಶಸ್ತಿ
  7. ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ
  8. ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ
  9. ೨೦೦೮ರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸರ್ಕಾರ ೨೦೧೦ರಲ್ಲಿ ಘೋಷಿಸಿದೆ.
  10. ಅವರು 1970ರಲ್ಲಿ ಬೆಂಗಳೂರಿನಲ್ಲಿ ನಡೆದ 47ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
  11. ‘ಅಂತಃಕರಣ’, ‘ರಸಷಷ್ಠಿ’, ‘ದೇಜಗೌ-ವ್ಯಕ್ತಿ ಮತ್ತು ಸಾಹಿತ್ಯ’, ‘ಅಪೂರ್ವ’ ಮತ್ತು ‘ನಮ್ಮ ನಾಡೋಜ’ಗಳು ಅವರಿಗೆ ಸಂದಿರುವ ಅಭಿನಂದನ ಗ್ರಂಥಗಳು.
  12. ಕರ್ನಾಟಕ ವಿಶ್ವವಿದ್ಯಾನಿಲಯ ೧೯೭೫ ರಲ್ಲಿ ಗೌರವ ಡಾಕ್ಟರೇಟ್ ಪುರಸ್ಕಾರ ನೀಡಿ ಗೌರವಿಸಿತು.
  13. ಕರ್ನಾಟಕ ಸರ್ಕಾರ ೨೦೧೦ ರಲ್ಲಿ ೨೦೦೮ನೇ ಸಾಲಿನ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

No comments:

Post a Comment