August 31, 2024

ತಳಲೂರು ಗ್ರಾಮದ ಶಿವದೇವಾಲಯದ ಹೊರ ಆವರಣದಲ್ಲಿ ಹೊಯ್ಸಳರ ಶಾಸನ ಪತ್ತೆ

 ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ತಳಲೂರು ಗ್ರಾಮದ ಶಿವದೇವಾಲಯದ ಹೊರ ಆವರಣದಲ್ಲಿ ಈವರೆಗೆ ಅಪ್ರಕಟಿತ ಶಾಸನ ಪತ್ತೆಯಾಗಿದ್ದು ಈ ಶಾಸನ  13ನೇ ಶತಮಾನದ ಹೊಯ್ಸಳ ಲಿಪಿ ಮತ್ತು ಕನ್ನಡ ಭಾಷೆಯಲ್ಲಿ ರಚಿಸಲಾಗಿದೆ. ಐದು ಸಾಲಿನ ಈ ಪುಟ್ಟ ಶಾಸನದ ಬರವಣಿಗೆಯ ಶೈಲಿ ಹೊಯ್ಸಳರ ಕಾಲದ ಲಿಪಿ ಲಕ್ಷಣವನ್ನು ಹೊಂದಿದ್ದರೂ ಅಕ್ಷರ ಸ್ಖಾಲಿತ್ಯಗಳಿವೆ.



ಶಾಸನೋಕ್ತ ಕಾಲದ ವಿವರಗಳು, 6ನೇ ತಾರೀಕು ಎಪ್ರಿಲ್ 1223ರ ಗುರುವಾರಕ್ಕೆ ಸರಿಹೊಂದುತ್ತದೆ. ಲಿಪಿ ಲಕ್ಷಣಗಳೂ ಸರಿಸುಮಾರು ಇದೇ ಕಾಲಕ್ಕೆ ಅನ್ವಯವಾಗುತ್ತವೆ. ಶಾಸನದಲ್ಲಿ ಬೃಹಸ್ಪತಿವಾರ ಎಂಬುದನ್ನು ಬ್ರಹವಾರವೆಂದು, ಅಕ್ಷಯ ಎಂಬುದನ್ನು ಹಕ್ಷಯ ಎಂದೂ, ಬಿಟ್ಟ ಎನ್ನುವುದನ್ನು ಬಿಠ ಎಂದು ಬರೆಯಲಾಗಿದೆ.

ಶಾಸನದ ಮಹತ್ವ: ಅರಸೀಕೆರೆ, ಹೊಯ್ಸಳ ರಾಜ್ಯದ ಹೃದಯಭಾಗ ವಾಗಿದ್ದು, ಹೊಯ್ಸಳರ ಕಾಲದ ಅಸಂಖ್ಯಾತ ಶಾಸನ, ವಾಸ್ತುಶಿಲ್ಪ, ಕೆರೆ-ಕಟ್ಟೆಗಳ ತವರೂರಾಗಿದೆ. ಪ್ರಸ್ತುತ ಶಾಸನದ ಮೇಲ್ಭಾಗದ ಪಟ್ಟಿಕೆಯಲ್ಲಿ ಶಿವಲಿಂಗವಿದೆ. ಲಿಂಗದ ಬಲಭಾಗದಲ್ಲಿ ವ್ಯಕ್ತಿಯೋರ್ವ ಅಂಜಲೀಬದ್ಧನಾಗಿ ಕುಳಿತಿರುವಂತೆ, ಎಡಭಾಗದಲ್ಲಿ ಹಸುವನ್ನು ಚಿತ್ರಿಸಲಾಗಿದೆ. 

ಕಾಚಯ ನಾಯಕ ಎಂಬ ಸ್ಥಳೀಯ ಅಧಿಕಾರಿ ವೈಶಾಖ ಬಹುಳದಂದು ಭಂಟಾರ ಎಂಬ ವ್ಯಕ್ತಿಗೆ ಮರಣೋತ್ತರವಾಗಿ ಅಕ್ಷಯ ಪುಣ್ಯ ಪ್ರಾಪ್ತಿ ಆಗಲಿಯೆಂದು ನೀಡಿದ ದಾನವನ್ನು ಶಾಸನದಲ್ಲಿ ದಾಖಲಿಸಲಾಗಿದೆ. ಭಂಟಾರ ಎಂಬುದು ಬಹುಶಃ ಭಟ್ಟಾರಕ ಎಂಬ ಪದದ ಪ್ರಕ್ಷಿಪ್ತ ರೂಪವಾಗಿರುವಂತಿದೆ. 

ಭಂಟಾರ ತಳಲೂರು ಗ್ರಾಮದಲ್ಲಿರುವ ಹೊಯ್ಸಳರ ಕಾಲದ ಶಿವ ದೇವಾಲಯದ ಶೈವಯತಿ ಆಗಿದ್ದಿರಬಹುದು. ಬಹುಳ ದಲ್ಲಿ ಮಾಡಿದ ದಾನ ಬಹುತೇಕ ಮರಣೋತ್ತರ ಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ, ಈ ಶಾಸನವನ್ನು ಭಂಟಾರ ಅಥವಾ ಭಟ್ಟಾರಕ ಎಂಬ ಶೈವಯತಿಯ ಮರಣ ದಾಖಲೆಯೆಂದು ಪರಿಗಣಿಸಬಹುದಾಗಿದೆ.

No comments:

Post a Comment