October 26, 2020

ಇತಿಹಾಸದ ಪುಟದಲ್ಲಿ ಹಾಸನ ದಸರಾ

ದಸರಾ ಬಂತೆಂದರೆ ದೇಶಾದ್ಯಂತ ಸಡಗರ ಸಂಭ್ರಮ ಮನೆ ಮಾಡುತ್ತದೆ. ಕರ್ನಾಟಕದ ನಾಡ ಹಬ್ಬದ ಈ ದಸರಾ ಅದರಲ್ಲೂ ಮೈಸೂರು ಭಾಗದ ಜನರಿಗೆ ನವರಾತ್ರಿ ಹಲವು ವೈಶಿಷ್ಟ್ಯಗಳ ಸಂಗಮ.
      ಮೈಸೂರು ದಸರಾ ಅಂತೂ ಕಣ್ಣಿಗೆ ಹಬ್ಬ ನಮ್ಮ ದೇಶದ ಹಾಗೂ ನಾಡಿನ ಸಂಪ್ರದಾಯವನ್ನು ಪ್ರತಿ ಬಿಂಬಿಸುವಂತಹ ದಸರಾ ಹಾಸನದಲ್ಲಿ ಸಹ “ಹಾಸನ ದಸರಾ” ನಡೆಯುತ್ತಾ ಬಂದಿದೆ.
     ಶಿಲ್ಪಕಲೆಯ ತವರು, ಶಾಸನಗಳ ಕಣಜ ವಿಶ್ವವಿಖ್ಯಾತ ಬೇಲೂರು ಹಳೇಬೀಡು ಹಾಗೂ ಶ್ರವಣಬೆಳಗೂಳ ಇರುವಂತಹ ಈ ಜಿಲ್ಲೆಯು ಸಾಹಿತ್ಯ, ಸಿನಿಮಾ, ಪತ್ರಿಕಾರಂಗ, ರಾಜಕೀಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಸಹ ತನ್ನದೇ ಆದಂತಹ ಒಂದು ಇತಿಹಾಸವನ್ನು ಹೊಂದಿದೆ. ಹೊಯ್ಸಳ ರಾಜಧಾನಿಯಾಗಿ ಮೆರೆದಂತಹ ಈ ಜಿಲ್ಲೆಯಲ್ಲಿ 18ನೆಯ ಶತಮಾನದಿಂದಲೂ ಹಾಸನ ದಸರಾ ಆಚರಿಸುತ್ತಾ ಬಂದಿದೆ.
     ವಿಜನಗರದಲ್ಲಿ ಕೃಷ್ಣದೇವರಾಯನ ಜನತೆಯ ಮುಂದೆ ರಾಜ್ಯ ಸಂತೋಷವನ್ನು ಹಂಚಿಕೊಳ್ಳಲ್ಲಿಕ್ಕೆ ಮೊಟ್ಟ ಮೊದಲ ಬಾರಿಗೆ ಚಿಕ್ಕದಾಗಿ ದಸರಾವನ್ನು ಪ್ರಾರಂಭ ಮಾಡಿದ್ದು ಕ್ರಿ.ಶ.1608ರಲ್ಲಿ ವಿಜಯನಗರದಲ್ಲಿ ಗವರ್ನರ್ ಆಗಿದ್ದ ಶ್ರೀರಂಗರಾಯರು ವಿಜಯನಗರವನ್ನು ಮೈಸೂರಿನ ರಾಜಮನೆತನದ ರಾಜ ಒಡೆಯರಿಗೆ ಹಸ್ತಾಂತರಿಸುವುದರ ಮೂಲಕ ದಸರಾ ಹಬ್ಬ ಮೈಸೂರು ರಾಜಮನೆತನದ ಒಂದು ಪ್ರಮುಖ ಭಾಗವೇ ಆಯಿತೆನ್ನಬಹುದು. ಮೈಸೂರು ರಾಜ ಒಡೆಯರಾದ ಕೃಷ್ಣರಾಜರು ಹಾಸನದ ರಾಘವಾರಾಜು ಎಂಬುವರಿಗೆ 18ನೆಯ ಶತಮಾನದಲ್ಲಿ ಪಟ್ಟದ ಕತ್ತಿ ನೀಡಿದರು. ಆ ಒಂದು ಕತ್ತಿಯಲ್ಲಿ ನವರಾತ್ರಿಯ ಕೊನೆಯ ದಿನ ಹಾಸನದ ಬನ್ನಿ ಮಂಟಪ(ಡಬಲ್ ಟ್ಯಾಂಕ್)ದಲ್ಲಿ ಬಾಳೆಕಂದನ್ನು ಕತ್ತರಿಸುವ ಮೂಲಕ ಹಾಸನ ದಸರಾವನ್ನು ಪ್ರರಂಭ ಮಾಡಿದರು. ಹೀಗೆ ಪ್ರರಂಭವಾದ ಹಾಸನ ದಸರಾ ಇವರ ನಂತರ ಲಕ್ಷ್ಮಣರಾಜು ಅವರು 1955 ರಿಂದ 1990ರ ತನಕ ಅಂದರೆ 35 ವರ್ಷಗಳು ಈ ಸಂಪ್ರದಾಯವನ್ನು ನಡೆಸಿದರು. ಪ್ರಸಕ್ತ ನರಸಿಂಹರಾಜ ಅರಸುರವರು 1991 ರಿಂದ ನಡೆಸುತ್ತಾ ಬಂದಿರುವರು.
     ಸಂಪ್ರದಾಯದಂತೆ ಪ್ರತಿ ವರ್ಷವು ಭಕ್ತರು ಶ್ರದ್ಧೆ ಮತ್ತು ಸಂಭ್ರಮದಿಂದ ನಗರದ ಸಿದ್ದೇಶ್ವರ ಸ್ವಾಮಿ, ನೀರು ಬಾಗಿಲು ಆಂಜನೇಯ ಸ್ವಾಮಿ, ಜಂಭುಕೇಶ್ವರ ಸ್ವಾಮಿ, ಮೈಲಾರ ಲಿಂಗೇಶ್ವರ ಸ್ವಾಮಿ ಮತ್ತು ವಿರೂಪಾಕ್ಷೇಶ್ವರ ಸ್ವಾಮಿಯನ್ನು ಹೊತ್ತು ಪಲ್ಲಕ್ಕಿಗಳ ಮೆರವಣಿಗೆಯಲ್ಲಿ ಹಾಸನ ನಗರದ ರಾಜ ಬೀದಿಯಲ್ಲಿ ಮೆರವಣಿಗೆಯ ಮುಖಾಂತರ ಬಂದು ಬನ್ನಿ ಮಂಟಪ(ಡಬಲ್ ಟ್ಯಾಂಕ್)ದಲ್ಲಿ ಈ ಐದು ದೇವರುಗಳನ್ನು ತಂದು ಪೂಜೆಯನ್ನು ಮಾಡಿ ನರಸಿಂಹರಾಜ ಅರಸರು ಬಾಳೆ ಕಂಬವನ್ನು ಕತ್ತರಿಸುವ ಮೂಲಕ ಹಾಸನ ದಸರಾವನ್ನು ಆಚರಿಸುವರು.

 - ದ್ಯಾವನೂರು ಮಂಜುನಾಥ್

1 comment: